ಮುನಿರಾಬಾದ್
ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯ ಕೊಪ್ಪಳ ತಾಲ್ಲೂಕಿನ ಒಂದು ಪಟ್ಟಣ. ಕೈಗಾರಿಕಾ ಕೇಂದ್ರ. ಕೊಪ್ಪಳದಿಂದ 23ಕಿಮೀ ದೂರದಲ್ಲಿ ಹುಬ್ಬಳ್ಳಿ-ಗುಂತಕಲ್ ರೈಲುಮಾರ್ಗದಲ್ಲಿದೆ.  ಹೊಸಪೇಟೆಯಿಂದ ಇಲ್ಲಿಗೆ 8 ಕಿಮೀ. ಜನಸಂಖ್ಯೆ 8,113 (2001). ತುಂಗಭದ್ರಾ ಅಣೆಕಟ್ಟಿನ ನಿರ್ಮಾಣದಿಂದ ಈ ಪಟ್ಟಣಕ್ಕೆ ವಿಶೇಷ ಮಹತ್ತ್ವ ಬಂದಿತು. ಕಟ್ಟೆಯ ಎಡಪಕ್ಕದಲ್ಲಿಯೇ ಇದೆ. ಇಲ್ಲಿಗೆ ಹೊಂದಿಕೊಂಡಿರುವ ಪಂಪಾಸಾಗರ ಜಲಾಶಯದ ದಂಡೆಯ ಬೆಟ್ಟದ ಮೇಲೆ ಕೈಲಾಸವೆಂದು ಕರೆಯಲಾಗುವ, ಅತ್ಯಾಧುನಿಕ ಸೌಕರ್ಯಗಳುಳ್ಳ ಬೃಹತ್ ಕಟ್ಟಡವಿದೆ. ಸಮೀಪದಲ್ಲಿ ಹೂವಿನ ತೋಟವಿದೆ. ಇವು ಇಲ್ಲಿಯ ಆಕರ್ಷಣೆಗಳು. ಜಪಾನಿ ಪದ್ಧತಿಯಂತೆ ರಚಿಸಿದ ತೋಟಗಳ ಪೈಕಿ ಇಲ್ಲಿಯದು ರಾಜ್ಯದಲ್ಲಿಯೇ ಪ್ರಪ್ರಥಮ.

	1944ರಲ್ಲಿ ಇಲ್ಲೊಂದು ಸಕ್ಕರೆ ಕಾರ್ಖಾನೆ ಸ್ಥಾಪಿತವಾಯಿತು. ಆದರೆ ರಜಕಾರರ ಹಾವಳಿಯಲ್ಲಿ ಅದು ಹಾಳಾಗಿತ್ತು. ಈಗ ಇಂಡಿಯ ಷುಗರ್ಸ್ ರಿಫೈನರಿ ಲಿಮಿಟೆಡ್ ಎಂಬ ಹೆಸರಿನಲ್ಲಿ ಉತ್ತಮಗೊಂಡಿದೆ. ಇಲ್ಲಿರುವ ಚಾಮುಂಡಿ ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ಸ್ ಎಂಬ ಗೊಬ್ಬರ ಕಾರ್ಖಾನೆ ಸಲ್ಫ್ಯೂರಿಕ್ ಆಮ್ಲ ಮತ್ತು ಸೂಪರ್ ಫಾಸ್ಫೇಟ್ ತಯಾರಿಸುತ್ತದೆ. ದಿ ತುಂಗಭದ್ರಾ ಪಲ್ಪ್ ಮತ್ತು ಬೋರ್ಡ್ ಫ್ಯಾಕ್ಟರಿಯಿಂದ ಕಾಗದದ ಕಚ್ಚಾಸಾಮಗ್ರಿ ಉತ್ಪಾದನೆಗೊಳ್ಳುತ್ತದೆ. 1963ರಲ್ಲಿ ಜಲವಿದ್ಯುದುತ್ಪಾದನಾಗರ ಸ್ಥಾಪನೆಯಾಯಿತು. ವಿದ್ಯುಜ್ಜನಕ ಕೇಂದ್ರ, ರಾಜ್ಯವಿದ್ಯುತ್ ಸಮಿತಿಯ ವಿಭಾಗ ಕಚೇರಿ, ಪ್ರೌಢಶಾಲೆ, ಆಸ್ಪತ್ರೆ, ರಂಗಮಂದಿರ ಮೊದಲಾಗ ಸೌಲಭ್ಯಗಳು ಇವೆ.

	ಇಲ್ಲಿರುವ 1088ರ ಶಾಸನವೊಂದರ ಪ್ರಕಾರ ಚಾಳುಕ್ಯ ಆರನೆಯ ವಿಕ್ರಮಾದಿತ್ಯ ಈ ಊರನ್ನು ಚೌವೇದಿ (ಚತುರ್ವೇದಿ) ಭಟ್ಟನಿಗೆ ದಾನಕೊಟ್ಟನೆಂದು ತಿಳಿದು ಬರುತ್ತದೆ. ಆತ ಆಗಲೇ ತುಂಗಭದ್ರಾ ನದಿಗೆ ಕಾಲುವೆ ತೆಗೆಯಿಸಿದ್ದನಂತೆ. ಹುಲುಗಿ ಎಂಬುದು (ಸಂಸ್ಕøತದಲ್ಲಿ ವ್ಯಾಘ್ರಪುರಿ) ಈ ಊರಿನ ಪ್ರಾಚೀನ ಹೆಸರು. ಇಲ್ಲಿ 13ನೆಯ ಶತಮಾನದಲ್ಲಿ ಕಟ್ಟಿಸಿದ ಪ್ರಸಿದ್ಧ ಹುಲಿಗೆಮ್ಮನ ದೇವಾಲಯವಿದೆ. ಪ್ರತಿ ವರ್ಷ ವೈಭವದಿಂದ ನಡೆಯುವ ಹುಲೆಗೆಮ್ಮನ ಜಾತ್ರೆ ಪ್ರಸಿದ್ಧವಾಗಿದೆ. ದೇವಾಲಯದ ಎದುರಿಗೆ ಸುಮಾರು 7.5 ಮೀ ಎತ್ತರದ ಧ್ವಜಸ್ತಂಭವಿದೆ. ಆವರಣದಲ್ಲಿ ಪರಶುರಾಮನ ಗುಡಿಯಿದೆ. ಸಮೀಪದಲ್ಲಿಯೇ ಪಂಚಲಿಂಗೇಶ್ವರ ದೇವಾಲಯವಿದೆ. ಇಲ್ಲಿ ಒಂದು ಜೈನ ಬಸದಿಯೂ ಉಂಟು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ